ಕ್ರೈಮ್ ಬ್ರಾಂಚ್ ಎಸ್‌ಐ ಚಿನ್ನ ಅಡವಿಟ್ಟು, ಜೂಜಿನಲ್ಲಿ ಕಳೆದುಕೊಂಡ ಒಂದೂವರೆ ಕೋಟಿ"
ಫೆಬ್ರವರಿ 02.ಆಂಧ್ರಪ್ರದೇಶದ ರಾಯಚೋಟಿ ಪೊಲೀಸ್ ಠಾಣೆಯಲ್ಲಿ ಕ್ರೈಮ್ ಬ್ರಾಂಚ್ ಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾನು ಪ್ರಕಾಶ್ ಅವರಿಂದ ನಡೆದ ಗಂಭೀರ ವಂಚನೆಯೊಂದು ಬೆಳಕಿಗೆ ಬಂದಿದೆ. ಪೊಲೀಸ್ ಅಧಿಕಾರಿಯಾಗಿದ್ದರೂ ಕಾನೂನಿನನ್ನೇ ಉಲ್ಲಂಘಿಸಿದ ಈ ಪ್ರಕರಣ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಭಾನು ಪ್ರಕಾಶ್ ಅವರಿಗೆ ಆಂಧ್ರಪ್ರದೇಶ ಸರ್ಕಾರದ ಎಲೆಕ್ಟ್ರಿಕಲ್ ಎಇ ಹುದ್ದೆಗೆ ನೇಮಕಾತಿ ದೊರೆತ ಹಿನ್ನೆಲೆ, ಪೊಲೀಸ್ ಸೇವೆಯಿಂದ ಬಿಡುಗಡೆಗೊಳಿಸುವಂತೆ ಅವರು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಇಲಾಖೆಯ ನಿಯಮಾನುಸಾರ ಅವರ ಬಳಿ ಇದ್ದ ಸರ್ವಿಸ್ ರಿವಾಲ್ವರ್ ಹಾಗೂ ಇತರೆ ಸಾಮಗ್ರಿಗಳನ್ನು ಹಿಂತಿರುಗಿಸುವಂತೆ ಸೂಚನೆ ನೀಡಿದಾಗ, ಇಡೀ ಪ್ರಕರಣ ಬಯಲಾಗುವಂತಾಯಿತು.
ಒಂದು ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಸುಮಾರು 4.3 ತುಲಾ ಚಿನ್ನವನ್ನು ಭಾನು ಪ್ರಕಾಶ್ ಕಾನೂನುಬಾಹಿರವಾಗಿ ಅಂಗಡಿಯೊಂದರಲ್ಲಿ ಅಡವಿಟ್ಟಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಪ್ರಕರಣ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಬಳಿಕ, ಮೂಲ ಮಾಲೀಕರು ತಮ್ಮ ಚಿನ್ನವನ್ನು ವಾಪಸ್ ಕೇಳಿದಾಗ, “ಚಿನ್ನ ಕಾಣೆಯಾಗಿದ್ದು” ಎಂದು ಎಸ್‌ಐ ಭಾನು ಪ್ರಕಾಶ್ ಉತ್ತರಿಸಿದ್ದರು.
ಇದರಿಂದ ಅನುಮಾನಗೊಂಡ ಮೇಲಾಧಿಕಾರಿಗಳು ಆಂತರಿಕ ತನಿಖೆ ನಡೆಸಿದಾಗ, ಭಾನು ಪ್ರಕಾಶ್ ಚಿನ್ನವನ್ನು ಅಡವಿಟ್ಟಿದ್ದ ಅಂಗಡಿಯನ್ನು ಪತ್ತೆಹಚ್ಚಿ, ಅಲ್ಲಿಂದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಭಾನು ಪ್ರಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಪೊಲೀಸರ ತನಿಖೆಯ ಪ್ರಕಾರ, 2018ರಿಂದ ಭಾನು ಪ್ರಕಾಶ್ ಬೆಟ್ಟಿಂಗ್ ಮತ್ತು ಜೂಜಿನ ಚಟಕ್ಕೆ ಬಿದ್ದು, ಇದುವರೆಗೆ ಸುಮಾರು ಒಂದೂವರೆ ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಇದೇ ಕಾರಣದಿಂದ ಅವರು ಕಳ್ಳತನ ಪ್ರಕರಣದ ಚಿನ್ನವಷ್ಟೇ ಅಲ್ಲದೆ, ತಮ್ಮ ಸರ್ವಿಸ್ ರಿವಾಲ್ವರ್‌ನನ್ನೂ ಅಡವಿಟ್ಟಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಈ ಪ್ರಕರಣ ಪೊಲೀಸ್ ಇಲಾಖೆಯೊಳಗಿನ ನೈತಿಕತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದ್ದು, “ಪೊಲೀಸರೇ ಹೀಗಾದರೆ ಸಾರ್ವಜನಿಕರ ಕಥೆ ಏನು?” ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಭಾನು ಪ್ರಕಾಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.













