ಕೊಪ್ಪಳ: ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಸಚಿವ, ಕನಕಗಿರಿ ಶಾಸಕ ಶಿವರಾಜ ತಂಗಡಗಿ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಸಾಮಾಜಿಕ ಜಾಲತಾಣ ‘X’ನಲ್ಲಿ ಶಿವರಾಜ ತಂಗಡಗಿ ಮಾಡಿರುವ ಸುದೀರ್ಘ ಪೋಸ್ಟ್ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಿವರಾಜ ತಂಗಡಗಿ, “ನಿನಗೆ ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ. ನೀನು ರಾಜೀನಾಮೆ ಕೊಟ್ಟ 24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡುತ್ತೇನೆ. ಗಂಗಾವತಿಯಲ್ಲಿ ನನ್ನ ವಿರುದ್ಧ ಉಪಚುನಾವಣೆ ಎದುರಿಸಿ ನಿನ್ನ ಬಲಾಬಲ ತೋರಿಸು” ಎಂದು ನೇರ ಸವಾಲು ಹಾಕಿದ್ದಾರೆ.

“ಜನಾದೇಶ ಯಾರ ಪರ ಎಂಬುದು ನೋಡೇ ಬಿಡೋಣ”
ತಮ್ಮ ಪೋಸ್ಟ್‌ನಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಹಲವು ಆರೋಪ ಹಾಗೂ ಟೀಕೆಗಳನ್ನು ಮಾಡಿರುವ ತಂಗಡಗಿ, ರಾಜೀನಾಮೆ ನೀಡುವ ಮೂಲಕ ಜನರ ತೀರ್ಪನ್ನು ಎದುರಿಸೋಣ ಎಂದು ಹೇಳಿದ್ದಾರೆ. “ನಿನಗೆ ನೇರ ಸವಾಲು ಹಾಕಿ ಪಂಥಾಹ್ವಾನ ನೀಡುತ್ತಿದ್ದೇನೆ. ನೀನು ‘ಎಸ್’ ಎಂದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಜನಾದೇಶ ಲೂಟಿಕೋರನಿಗೋ? ಜನ ಸೇವಕನಿಗೋ? ನೋಡೇ ಬಿಡೋಣ” ಎಂದು ಅವರು ಬರೆದುಕೊಂಡಿದ್ದಾರೆ.
ಹಿಂದಿನ ರಾಜಕೀಯ ಸಂಬಂಧ ನೆನಪಿಸಿದ ತಂಗಡಗಿ
ತಾವು ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ತಮ್ಮ ಬಳಿ ಬೆಂಬಲ ಕೇಳಿದ್ದರು ಎಂದು ಶಿವರಾಜ ತಂಗಡಗಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. “ತಮ್ಮುಡು, ತಮ್ಮುಡು ಎಂದು ಗೋಗರೆದು ಬೆಂಬಲ ಕೇಳಿದ್ದವರು ಈಗ ಸುಳ್ಳುಗಳ ಸರಮಾಲೆ ಹೆಣೆದು ಮಾತನಾಡುತ್ತಿದ್ದಾರೆ” ಎಂದು ಅವರು ಟೀಕಿಸಿದ್ದಾರೆ. ತಮ್ಮ ಬೆಂಬಲದಿಂದ ಜನಾರ್ದನ ರೆಡ್ಡಿ ಹಾಗೂ ಅವರ ಸಹೋದರರಿಗೆ ಸಚಿವ ಸ್ಥಾನ ದೊರೆಯಿತು ಎಂಬ ಅರ್ಥದಲ್ಲಿ ತಂಗಡಗಿ ಹೇಳಿಕೆ ನೀಡಿದ್ದಾರೆ. ತಮ್ಮ ಕನಕಗಿರಿ ಕ್ಷೇತ್ರದ ಜನರು ನೀಡಿದ ಬೆಂಬಲವೂ ಇದರಲ್ಲಿ ಪ್ರಮುಖವಾಗಿತ್ತು ಎಂದು ಅವರು ಹೇಳಿದ್ದಾರೆ.

ಹಣ ನೀಡಿದ್ದ ಆರೋಪಕ್ಕೂ ತಿರುಗೇಟು
ಜನಾರ್ದನ ರೆಡ್ಡಿ ತಮಗೆ ಹಣ ನೀಡಿದ್ದರು ಎಂಬ ರೀತಿಯಲ್ಲಿ ಮಾಡಿರುವ ಆರೋಪವನ್ನು ಶಿವರಾಜ ತಂಗಡಗಿ ತಳ್ಳಿಹಾಕಿದ್ದಾರೆ. “ನಿನ್ನಂತಹ ಅಡ್ಡಾದಿಡ್ಡಿ ದಾರಿಯಲ್ಲಿ ಹಣ ಸಂಪಾದಿಸಿದವರ ಬಳಿ ಹಣ ಪಡೆಯುವ ದುರ್ದೈವ ನನಗೆ ಬಂದಿಲ್ಲ” ಎಂದು ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಅಲ್ಲದೆ, ತಾವು ಪಕ್ಷೇತರ ಶಾಸಕರಾಗಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಹಾಗೂ ಅವರ ಬೆಂಬಲಿಗರು ತಮ್ಮ ಮನೆ ಮುಂದೆ ಬೆಂಬಲಕ್ಕಾಗಿ ಕಾಯುತ್ತಿದ್ದರು ಎಂದು ಹೇಳಿಕೊಂಡಿರುವ ತಂಗಡಗಿ, ಆ ದಿನಗಳನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.

ರಾಜ್ಯಸಭಾ ಚುನಾವಣೆ ವಿಚಾರವೂ ಪ್ರಸ್ತಾಪ
ಕಳೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ತಮ್ಮನ್ನು ಹಲವು ಬಾರಿ ಸಂಪರ್ಕಿಸಿದ್ದರು ಎಂದು ಶಿವರಾಜ ತಂಗಡಗಿ ಆರೋಪಿಸಿದ್ದಾರೆ. “ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ನನಗೆ ಎಷ್ಟು ಕರೆ ಮಾಡಿದ್ದೀಯ? ಯಾರಿಗೆ ವೋಟ್ ಹಾಕಿದ್ದೀಯ? ಕಾಲ್ ಲಿಸ್ಟ್ ತೆಗೆದು ಬಹಿರಂಗಪಡಿಸು” ಎಂದು ಸವಾಲು ಹಾಕಿದ್ದಾರೆ. ಇದರಿಂದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಗಳನ್ನೂ ಬಹಿರಂಗ ಚರ್ಚೆಗೆ ತರುವ ಪ್ರಯತ್ನವನ್ನು ತಂಗಡಗಿ ಮಾಡಿದ್ದಾರೆ.

ಗಣಿ ಪ್ರಕರಣಗಳ ಹಿನ್ನೆಲೆ ಉಲ್ಲೇಖಿಸಿ ವಾಗ್ದಾಳಿ. ಜನಾರ್ದನ ರೆಡ್ಡಿ ಅವರ ಹಿಂದಿನ ಗಣಿ ವ್ಯವಹಾರಗಳು ಹಾಗೂ ಜೈಲು ಪ್ರಕರಣಗಳನ್ನೂ ಶಿವರಾಜ ತಂಗಡಗಿ ತಮ್ಮ ಪೋಸ್ಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಗಣಿ ಅಕ್ರಮದ ಆರೋಪಗಳನ್ನು ಮುಂದಿಟ್ಟುಕೊಂಡು ರೆಡ್ಡಿ ವಿರುದ್ಧ ಕಟುವಾದ ಪದಗಳನ್ನು ಬಳಸಿದ್ದಾರೆ.
ಜೈಲಿಗೆ ಹೋಗಿದ್ದ ವಿಚಾರವನ್ನು ಉಲ್ಲೇಖಿಸಿ, “ಗಣಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ ಎಂದರೆ ‘ಫೀಲ್ ದಿ ಜೈಲ್’ ಪ್ಯಾಕೇಜ್ ಮೇಲೆ ಹೋಗಿದ್ಯಾ?” ಎಂದು ವ್ಯಂಗ್ಯವಾಡಿದ್ದಾರೆ.ಇದರ ಜೊತೆಗೆ ಗಂಗಾವತಿಯಲ್ಲಿ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ಡಬಲ್ ಬೆಡ್‌ರೂಮ್ ಮನೆಗಳು ಹಾಗೂ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಭರವಸೆಗಳ ಕುರಿತು ಜನಾರ್ದನ ರೆಡ್ಡಿ ಅವರನ್ನು ತಂಗಡಗಿ ಪ್ರಶ್ನಿಸಿದ್ದಾರೆ.

“ಬಂಡವಾಳ ಬಯಲು ಮಾಡಬೇಕಾದೀತು”
ತಮ್ಮ ಬಗ್ಗೆ “ಕಾಲಿಗೆ ಬಿದ್ದಿದ್ದರು” ಎಂಬ ಹೇಳಿಕೆ ನೀಡಿದ್ದರೆ ಅದಕ್ಕೂ ತಂಗಡಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಾನು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದರೆ ನಿನ್ನ ಬಂಡವಾಳ ಬಟಾಬಯಲಾಗುತ್ತದೆ. ಕತ್ತಲೆ ಲೋಕದ ಕರಾಳ ಮುಖ ಕಳಚಿ ಬೀಳುತ್ತದೆ” ಎಂದು ಅವರು ಎಚ್ಚರಿಕೆಯ ಧಾಟಿಯಲ್ಲಿ ಬರೆದುಕೊಂಡಿದ್ದಾರೆ.

ಉಪಚುನಾವಣೆ ಸವಾಲು ಸ್ವೀಕರಿಸುತ್ತಾರಾ ರೆಡ್ಡಿ?
ಒಟ್ಟಾರೆ ಶಿವರಾಜ ತಂಗಡಗಿ ಅವರ X ಪೋಸ್ಟ್‌ನಲ್ಲಿ ಜನಾರ್ದನ ರೆಡ್ಡಿ ವಿರುದ್ಧ ವೈಯಕ್ತಿಕ ಹಾಗೂ ರಾಜಕೀಯ ಆರೋಪಗಳೊಂದಿಗೆ ಹಲವು ಪ್ರಶ್ನೆಗಳನ್ನು ಎತ್ತಲಾಗಿದೆ. ಪ್ರಮುಖವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗಂಗಾವತಿಯಲ್ಲಿ ಉಪಚುನಾವಣೆ ಎದುರಿಸುವಂತೆ ಹಾಕಿರುವ ಸವಾಲು ಇದೀಗ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ತಂಗಡಗಿ ಅವರ ಈ ನೇರ ಸವಾಲಿಗೆ ಜನಾರ್ದನ ರೆಡ್ಡಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ. ಇಬ್ಬರು ನಾಯಕರ ನಡುವಿನ ವಾಕ್ಸಮರ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯೂ ಇದೆ.













