ಮುಧೋಳ: ಸಣ್ಣಪುಟ್ಟ ಕೌಟುಂಬಿಕ ಭಿನ್ನಾಭಿಪ್ರಾಯಗಳು ಕೆಲವೊಮ್ಮೆ ಎಂತಹ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಪತಿ-ಪತ್ನಿ ಇಬ್ಬರೂ ಮೃತಪಟ್ಟಿದ್ದು, ಅವರ ನಾಲ್ಕು ವರ್ಷದ ಹಾಗೂ 16 ತಿಂಗಳ ಎರಡು ಪುಟ್ಟ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿವೆ. ಎಂಟು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಪ್ಪಾಶಿ ಮತ್ತು ರಾಜೇಶ್ವರಿ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದರು. ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಕುಟುಂಬದಲ್ಲಿ ಕಳೆದ ಆರು ತಿಂಗಳ ಹಿಂದೆ ಕಾಣೆಯಾದ ಐದು ಗ್ರಾಂ ತೂಕದ ಚಿನ್ನದ ಉಂಗುರದ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.

ರಾಜೇಶ್ವರಿ ಅವರ ಚಿನ್ನದ ಉಂಗುರ ಕಾಣೆಯಾಗಿದ್ದರಿಂದ ಮನೆಯಲ್ಲಿ ಆಗಾಗ ಅಸಮಾಧಾನ ವ್ಯಕ್ತವಾಗುತ್ತಿತ್ತು. ಉಂಗುರದ ವಿಚಾರವಾಗಿ ಮನೆಯವರ ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಕೆಲವೊಮ್ಮೆ ವಾಗ್ವಾದಗಳು ನಡೆಯುತ್ತಿದ್ದವು. ಪರಿಸ್ಥಿತಿ ತಿಳಿಗೊಳಿಸಲು ಅತ್ತೆಯೂ ಮಧ್ಯಪ್ರವೇಶಿಸಿ, ಕಳೆದುಹೋದ ಉಂಗುರದ ಬದಲಿಗೆ ಹೊಸ ಉಂಗುರ ಮಾಡಿಸಿಕೊಡುವುದಾಗಿ ಸಮಾಧಾನಪಡಿಸಿದ್ದರು ಎನ್ನಲಾಗಿದೆ. ಆದರೂ ಕುಟುಂಬದಲ್ಲಿನ ಮನಸ್ತಾಪ ಸಂಪೂರ್ಣವಾಗಿ ಬಗೆಹರಿದಿರಲಿಲ್ಲ. ಇತ್ತೀಚೆಗೆ ಇದೇ ವಿಚಾರವಾಗಿ ಪತಿ-ಪತ್ನಿಯ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿತ್ತು. ಮನೆಯ ಹಿರಿಯರು ಮಧ್ಯಪ್ರವೇಶಿಸಿ ಇಬ್ಬರಿಗೂ ಸಮಾಧಾನ ಹೇಳಿದ್ದರು ಎನ್ನಲಾಗಿದೆ. ಆದರೆ, ಈ ಘಟನೆಯ ಬೆನ್ನಲ್ಲೇ ಅಪ್ಪಾಶಿ ಮತ್ತು ರಾಜೇಶ್ವರಿ ಇಬ್ಬರೂ ದುರಂತ ಅಂತ್ಯ ಕಂಡಿದ್ದಾರೆ. ಪತಿ ಮೃತಪಟ್ಟಿರುವುದನ್ನು ಕಂಡು ಆಘಾತಕ್ಕೊಳಗಾದ ರಾಜೇಶ್ವರಿ ಕೂಡ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಪ್ಪ-ಅಮ್ಮನಿಲ್ಲದೆ ಕಂಗಾಲಾದ ಕಂದಮ್ಮಗಳು
ಒಂದು ಕುಟುಂಬದ ನೆಮ್ಮದಿಗೆ ಸಾಕ್ಷಿಯಾಗಿದ್ದ ಇಬ್ಬರು ಮಕ್ಕಳ ಬದುಕಿನಲ್ಲಿ ಈಗ ಕತ್ತಲು ಆವರಿಸಿದೆ. ನಾಲ್ಕು ವರ್ಷದ ಮಗು ಹಾಗೂ ಕೇವಲ 16 ತಿಂಗಳ ಹಸುಗೂಸು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಸಂಬಂಧಿಕರ ಆಶ್ರಯಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಐದು ಗ್ರಾಂ ಚಿನ್ನದ ಉಂಗುರದ ವಿಚಾರವಾಗಿ ಆರಂಭವಾದ ಕೌಟುಂಬಿಕ ಮನಸ್ತಾಪ ಇಂತಹ ದುರಂತದಲ್ಲಿ ಅಂತ್ಯಗೊಂಡಿರುವುದು ಗ್ರಾಮಸ್ಥರಲ್ಲಿ ತೀವ್ರ ದುಃಖ ಮೂಡಿಸಿದೆ.

ಕೋಪಕ್ಕಿಂತ ತಾಳ್ಮೆ ದೊಡ್ಡದು
ಜೀವನದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಯಾವುದೇ ಸಮಸ್ಯೆ ಎದುರಾದಾಗ ದುಡುಕಿನ ನಿರ್ಧಾರ ಕೈಗೊಳ್ಳದೆ, ಕುಟುಂಬದ ಹಿರಿಯರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಮುಖ್ಯ. ಕಳೆದುಹೋದ ವಸ್ತುಗಳನ್ನು ಮತ್ತೆ ಸಂಪಾದಿಸಬಹುದು; ಆದರೆ ಕಳೆದುಹೋದ ಜೀವಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಸಣ್ಣಪುಟ್ಟ ಮನಸ್ತಾಪಗಳಿಗೆ ಜೀವವೇ ಪರಿಹಾರವಾಗಬಾರದು. ನಮ್ಮನ್ನು ನಂಬಿಕೊಂಡು ಬದುಕುವ ಮಕ್ಕಳ ಭವಿಷ್ಯವನ್ನೂ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.












