ಕರ್ನಾಟಕ ರಾಜ್ಯ ಶ್ರೀ ಕೃಷ್ಣ ಪರಮಾತ್ಮ ಬೀರಲಿಂಗೇಶ್ವರ ಕುರಿಗಾಳಿಗಳ ಹಿತ ರಕ್ಷಣಾ ಸಂಘಟನೆ ರಚನೆ
ಸಿಂಧನೂರು | ಮೇ 09 BB NEWS KANNADA
ಸಿಂಧನೂರು ನಗರದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಲಯದಲ್ಲಿ ಇಂದು ಕುರಿಗಾರರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕುರಿಗಾರರು ತಮ್ಮ ಜೀವನದ ಸಂಕಷ್ಟಗಳು, ಸರ್ಕಾರದ ನಿರ್ಲಕ್ಷ್ಯ ಹಾಗೂ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತು ಮುಕ್ತವಾಗಿ ಅಳಲು ತೋಡಿಕೊಂಡರು.


ಸಭೆಯಲ್ಲಿ ಮಾತನಾಡಿದ ಕುರಿಗಾರರು,“ನಮಗೆ ಭದ್ರತೆ ಇಲ್ಲ. ನಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಕುರಿ ಮೇಯಿಸಲು ಹೋದರೆ ಕೆಲ ರೈತರು ದೌರ್ಜನ್ಯ ಮಾಡುತ್ತಾರೆ. ಅರಣ್ಯ ಪ್ರದೇಶಗಳಿಗೆ ಪ್ರವೇಶ ನೀಡುವುದಿಲ್ಲ. ಸರ್ಕಾರಿ ಹಾಗೂ ಗಾಯರಾಣ ಭೂಮಿಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆಗಳು ಕೂಡ ಒತ್ತುವರಿಯಾಗಿರುವುದರಿಂದ ಬೇಸಿಗೆಯಲ್ಲಿ ಕುರಿಗಳಿಗೆ ನೀರು ಸಿಗುತ್ತಿಲ್ಲ” ಎಂದು ಆರೋಪಿಸಿದರು.


ಇದರ ಜೊತೆಗೆ ಪಶು ಆಸ್ಪತ್ರೆಗಳಲ್ಲಿ ಸಮಯಕ್ಕೆ ಸರಿಯಾಗಿ ಔಷಧಿ ದೊರೆಯುತ್ತಿಲ್ಲ, ವೈದ್ಯಾಧಿಕಾರಿಗಳು ಲಭ್ಯವಿರುವುದಿಲ್ಲ, ಕುರಿಗಳು ಮೃತಪಟ್ಟರೆ ಸರ್ಕಾರದಿಂದ ಪರಿಹಾರ ಹಣ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
🐑 ಕುರಿ ಕಳ್ಳರ ಹಾವಳಿ – ಪೊಲೀಸರ ವಿರುದ್ಧ ಆಕ್ರೋಶ
ಸಭೆಯಲ್ಲಿ ಕುರಿಗಾರರು ಕುರಿ ಕಳ್ಳರ ಹಾವಳಿಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.“ರಾತ್ರಿ ವೇಳೆ ಹಟ್ಟಿಗಳಿಗೆ ನುಗ್ಗಿ ವಾಹನಗಳಲ್ಲಿ ಕುರಿಗಳನ್ನು ತುಂಬಿಕೊಂಡು ಹೋಗುತ್ತಾರೆ. ಪೊಲೀಸ್ ಇಲಾಖೆಗೆ ದೂರು ನೀಡಿದರೂ ಸರಿಯಾಗಿ ಪ್ರಕರಣ ದಾಖಲಿಸುವುದಿಲ್ಲ” ಎಂದು ದೂರಿದರು.

ರಸ್ತೆಗಳಲ್ಲಿ ಕುರಿಗಳನ್ನು ಕೊಂಡೊಯ್ಯುವ ಸಂದರ್ಭದಲ್ಲಿ ವಾಹನಗಳು ಅತಿವೇಗವಾಗಿ ಬಂದು ಕುರಿಗಳ ನಡುವೆ ನುಗ್ಗಿ ಅಪಘಾತ ಮಾಡುತ್ತಿವೆ. ಇದರಿಂದ ಕುರಿಗಾರರು ಹಾಗೂ ಕುರಿಗಳು ಸಾವನ್ನಪ್ಪುತ್ತಿದ್ದರೂ ವಾಹನ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಸಭೆಯಲ್ಲಿ ಆರೋಪಿಸಲಾಯಿತು.

⚡ ಸಿಡಿಲು ಮಳೆ, ಅಪಘಾತ – ಪರಿಹಾರವಿಲ್ಲ
ಸಿಡಿಲು ಮಳೆಯಿಂದ ಕುರಿಗಳು ಮೃತಪಟ್ಟರೂ ಸರ್ಕಾರ ಪರಿಹಾರ ನೀಡುವುದಿಲ್ಲ. ರೈತರಿಗೆ ನೀಡುವ ಸೌಲಭ್ಯಗಳಾದ ಸೆಡ್ಡಿನ ತಾಡಪಾಲ್, ಬ್ಯಾಟರಿ, ಸೋಲಾರ್ ಬೆಳಕು ಮೊದಲಾದವು ಕುರಿಗಾರರಿಗೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅದೇ ರೀತಿ ಕುರಿ ಸಂತೆಯಲ್ಲಿ ಅನಧಿಕೃತ ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳು ಕುರಿಗಳನ್ನು ಖರೀದಿಸಿ ಹಣ ನೀಡದೆ ಪರಾರಿಯಾಗುತ್ತಿರುವುದು ಸಾಮಾನ್ಯವಾಗಿದ್ದು, ಕೆಲವೊಮ್ಮೆ ಗುಂಡಾಗಿರಿ ನಡೆಸುತ್ತಿರುವುದಾಗಿ ಕುರಿಗಾರರು ಆರೋಪಿಸಿದರು.

📚 ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಸೌಲಭ್ಯ ಬೇಕು
“ನಮಗೆ ಅಲೆಮಾರಿ ಪ್ರಮಾಣ ಪತ್ರ ಸಿಗುತ್ತಿಲ್ಲ. ನಮ್ಮ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ದೊರೆಯುತ್ತಿಲ್ಲ. ಸರಿಯಾದ ಶಿಕ್ಷಣದಿಂದ ನಮ್ಮ ಮಕ್ಕಳು ವಂಚಿತರಾಗುತ್ತಿದ್ದಾರೆ” ಎಂದು ಕುರಿಗಾರರು ತಮ್ಮ ನೋವನ್ನು ಹಂಚಿಕೊಂಡರು.
✊ ಹಕ್ಕುಗಳಿಗಾಗಿ ಸಂಘಟನೆಯ ರಚನೆ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಕುರಿಗಾರರು ಸಂಘಟಿತರಾಗಲು ನಿರ್ಧರಿಸಿದ್ದು, ಇದೇ ಸಂದರ್ಭದಲ್ಲಿ“ಕರ್ನಾಟಕ ರಾಜ್ಯ ಶ್ರೀ ಕೃಷ್ಣ ಪರಮಾತ್ಮ ಬೀರಲಿಂಗೇಶ್ವರ ಕುರಿಗಾಳಿಗಳ ಹಿತ ರಕ್ಷಣಾ ಸಂಘಟನೆ” ರಚಿಸಲಾಯಿತು.

ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಹನುಮಂತ ಸೂಜಿ ರತ್ನಾಪುರ ಹಟ್ಟಿ ಆಯ್ಕೆಯಾಗಿದ್ದು, ಪದಾಧಿಕಾರಿಗಳಾಗಿ ವಿತೋಬಾ ಪೂಜಾರಿ ಮ್ಯಾದರಾಳ, ಶರಣಪ್ಪ ನೀರುಲೂಟಿ, ವಜ್ರಪ್ಪ ಘಂಟೆರ ಹಟ್ಟಿ, ಹನುಮಂತ ದಂಡಿನ್ ಸುಲ್ತಾನಪುರ ಗೊಲ್ಲರಟ್ಟಿ, ಪಂಪಣ್ಣ ಜವಳಗೇರಾ ಬೋಗಪುರ ಆಯ್ಕೆಯಾದರು.
ವಿವಿಧ ತಾಲೂಕುಗಳ ಅಧ್ಯಕ್ಷರ ಆಯ್ಕೆ
ಕನಕಗಿರಿ ತಾಲೂಕು ಅಧ್ಯಕ್ಷರಾಗಿ ಹನುಮಂತ ನವಲಿ
ಗಂಗಾವತಿ ತಾಲೂಕು ಅಧ್ಯಕ್ಷರಾಗಿ ಮರಿಸ್ವಾಮಿ ಗುರುವಿನ್ ಹಾರಾಳ
ಕುಷ್ಟಗಿ ತಾಲೂಕು ಅಧ್ಯಕ್ಷರಾಗಿ ಶ್ಯಾಮಣ್ಣ ಬಿಂಗಿ ಅಮರಾಪುರ
ಲಿಂಗಸುಗೂರು ತಾಲೂಕು ಅಧ್ಯಕ್ಷರಾಗಿ ಸೋಮಣ್ಣ ಬಿಂಗಿ ಕ್ಯಾಡೇವು
ಸಿಂಧನೂರು ತಾಲೂಕು ಅಧ್ಯಕ್ಷರಾಗಿ ಹನುಮಂತ ಎಸ್ ವೀರಾಪುರ
ಹಾಗೂ ವಿವಿಧ ತಾಲೂಕುಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಗಣ್ಯರ ಉಪಸ್ಥಿತಿ ಸಭೆಯಲ್ಲಿ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ Sharanappa Marali Sultanpur ಮಾತನಾಡಿ, ಕುರಿಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ಅಗತ್ಯ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲಾಧ್ಯಕ್ಷರಾದ ರಾಮಯ್ಯ ಜವಳಗೇರಾ, ಜಿಲ್ಲಾ ಕೋಶಾಧ್ಯಕ್ಷರಾದ ನರಿಯಪ್ಪ ಪೂಜಾರಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ವೆಂಕಟೇಶ ರತ್ನಾಪುರ ಹಟ್ಟಿ, ಸಿಂಧನೂರು ತಾಲೂಕು ಅಧ್ಯಕ್ಷರಾದ ನಾಗಪ್ಪ ಬೂದಿಹಾಳ, ತಾಲೂಕು ಗೌರವಾಧ್ಯಕ್ಷರಾದ ಪರಯ್ಯ ಸ್ವಾಮಿ, ತಾಲೂಕು ಅಧ್ಯಕ್ಷರಾದ ಮೌನೇಶ ಕನ್ನಾರಿ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಗೂ ಕುರಿಗಾರರು ಉಪಸ್ಥಿತರಿದ್ದರು.










