ರಾಯಚೂರು: ನಗರದ ಬಸವೇಶ್ವರ ವೃತ್ತದ ಸಮೀಪದ ಚರಂಡಿಯಲ್ಲಿ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡಕ್ಕೆ ಬಳಸುವ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ಔಷಧಿಗಳನ್ನು ಎಸೆದವರನ್ನು ಪತ್ತೆಹಚ್ಚಿ ಎಫ್ಐಆರ್ ದಾಖಲಿಸುವ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ತಿಳಿಸಿದ್ದಾರೆ.
ಅಕ್ಟೋಬರ್ 13ರಂದು ಚರಂಡಿಯಲ್ಲಿ ಔಷಧಿಗಳು ಪತ್ತೆಯಾಗಿದ್ದು, ಮಾಹಿತಿ ದೊರೆತ ತಕ್ಷಣ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಹಾಗೂ ತಂಡವನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಪತ್ತೆಯಾದ ಔಷಧಿಗಳು ಅವಧಿ ಮೀರಿದವುಗಳಾಗಿದ್ದು, ಅವುಗಳನ್ನು ಸಂಗ್ರಹಿಸಿ ಆರೋಗ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇ-ಔಷಧ ಪೋರ್ಟಲ್ ಮೂಲಕ ಪತ್ತೆ
ಆರೋಗ್ಯ ಇಲಾಖೆಗೆ ಸರಬರಾಜಾಗುವ ಔಷಧಿಗಳನ್ನು ಬಳಕೆಯ ಅವಧಿ ಮುಗಿದ ಬಳಿಕ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಿಲೇವಾರಿ ಮಾಡುವುದು ಕಡ್ಡಾಯವಾಗಿದೆ. ಆದರೆ, ಈ ಪ್ರಕರಣದಲ್ಲಿ ಔಷಧಿಗಳನ್ನು ಚರಂಡಿಗೆ ಎಸೆದಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಇ-ಔಷಧ ಪೋರ್ಟಲ್ ಮೂಲಕ ಔಷಧಿಗಳ ಮೂಲವನ್ನು ಪತ್ತೆಹಚ್ಚಿ, ಸಂಬಂಧಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ನಂದಿತಾ ತಿಳಿಸಿದ್ದಾರೆ.
ಗೃಹ ಆರೋಗ್ಯ ಯೋಜನೆಯ ಔಷಧಿಗಳು
ಚರಂಡಿಯಲ್ಲಿ ಪತ್ತೆಯಾದ ಮಾತ್ರೆಗಳು ಗೃಹ ಆರೋಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಮುದಾಯ ಆರೋಗ್ಯ ಅಧಿಕಾರಿಗಳ ಮೂಲಕ ಮನೆಮನೆಗೆ ತೆರಳಿ ವಿತರಿಸಲಾಗುವ ಔಷಧಿಗಳಾಗಿವೆ. ಈ ಔಷಧಿಗಳ ಬಳಕೆ ಮತ್ತು ವಿತರಣೆಯ ಕುರಿತು ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಗಳಿಂದಲೇ ನಿರಂತರ ಸಭೆಗಳನ್ನು ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಎಲ್ಲ ತಾಲೂಕುಗಳಲ್ಲಿ ಔಷಧಿಗಳ ಬಳಕೆಯ ಮೇಲೆ ನಿಗಾ ವಹಿಸಲಾಗುತ್ತಿದ್ದು, ವಿತರಣೆ ವಿವರಗಳನ್ನು ಇ-ಔಷಧ ಪೋರ್ಟಲ್ನಲ್ಲಿ ದಾಖಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳನ್ನು ನಿಯಮಬಾಹಿರವಾಗಿ ವಿಲೇವಾರಿ ಮಾಡುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣದಲ್ಲಿ ಔಷಧಿಗಳನ್ನು ಎಸೆದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












