📍ಸಿಂಧನೂರು ತಾಲ್ಲೂಕು | ವಿಶೇಷ ವರದಿ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಉಮಲೂಟಿ ಗ್ರಾಮ ಪಂಚಾಯಿತಿಯ ಬುಕ್ಕನಟ್ಟಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತೀವ್ರಗೊಂಡಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಗ್ರಾಮದ SC ವಾರ್ಡ್ ಪ್ರದೇಶಗಳಲ್ಲಿ ಕಳೆದ ಸುಮಾರು 18 ವರ್ಷಗಳಿಂದ ರಸ್ತೆ ಸಮಸ್ಯೆ ಬಗೆಹರಿಯದೆ ಜನರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಳೆ ಬಂದಾಗ ರಸ್ತೆಗಳೆಲ್ಲ ನೀರಿನಿಂದ ತುಂಬಿ ಕೆಸರುಮಯವಾಗುತ್ತಿದ್ದು, ಮನೆಗಳೊಳಗೂ ನೀರು ನುಗ್ಗುತ್ತಿದೆ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಗಬ್ಬೆದ್ದು ದುರ್ವಾಸನೆ ಬರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ನಿರ್ಮಾಣವಾಗಿದೆ. ಹಲವೆಡೆ ಹಾವುಗಳ ಕಾಟವೂ ಹೆಚ್ಚಾಗಿದ್ದು, ಈಗಾಗಲೇ ಕೆಲವು ಹಾವು ಕಚ್ಚಿದ ಘಟನೆಗಳು ನಡೆದಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.


ಗ್ರಾಮದಲ್ಲಿ ಗಲೀಜು ನೀರು ಹರಿದು ಹೋಗಲು ಸಮರ್ಪಕ ಗಟಾರು ವ್ಯವಸ್ಥೆಯೇ ಇಲ್ಲ. ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗಿದ್ದು, ಶುದ್ಧ ನೀರು ಸಿಗದೆ ಜನರು ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಿದ್ಯುತ್ ತಂತಿಗಳು ಹಲವೆಡೆ ಕೆಳಗೆ ಬಿದ್ದಿರುವುದರಿಂದ ಮಕ್ಕಳು ಹಾಗೂ ವೃದ್ಧರು ಭಯದಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

“ನಮ್ಮ ಗ್ರಾಮ ಸಿಂಧನೂರು ತಾಲೂಕಿನ ಕೊನೆಯ ಗ್ರಾಮವಾಗಿರುವುದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಆಡಳಿತ ಹಾಗೂ ಶಾಸಕರ ಗಮನಕ್ಕೂ ತಂದಿದ್ದೇವೆ. ‘ಮಾಡುತ್ತೇವೆ’ ಎಂದು ಭರವಸೆ ನೀಡಿದರೂ ಇದುವರೆಗೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ” ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗ್ರಾಮಸ್ಥರ ಪ್ರಕಾರ, ರಸ್ತೆ ಸ್ವಚ್ಛತೆ ಕಾರ್ಯವನ್ನು ಕೂಡ ಜನರೇ ಸ್ವತಃ ಮಾಡಿಕೊಳ್ಳುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸರ್ಕಾರದ ಯಾವುದೇ ಯೋಜನೆಗಳು ಸಮರ್ಪಕವಾಗಿ ಗ್ರಾಮಕ್ಕೆ ತಲುಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ತಕ್ಷಣ ರಸ್ತೆ ದುರಸ್ತಿ, ನೀರು ಹರಿಯುವ ಗಟಾರು ವ್ಯವಸ್ಥೆ, ವಿದ್ಯುತ್ ತಂತಿಗಳ ದುರಸ್ತಿ, ಸ್ವಚ್ಛತಾ ಕ್ರಮ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೊತೆಗೆ ತಾಲ್ಲೂಕು ಆಡಳಿತ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.













